ಗರ್ಭದಲ್ಲಿರುವ ಭ್ರೂಣದ ಪತ್ತೆ ಹಾಗೂ ಹತ್ಯೆ ಮಾಡುವುದು ಕಾನೂನುರೀತ್ಯಾ ಅಪರಾಧವಾಗಿದ್ದು , ಈ ಕಾರ್ಯದಲ್ಲಿ ತೊಡಗುವ ತಂದೆ-ತಾಯಿ ಹಾಗೂ ವೈದ್ಯರು ಕಠಿಣ ಶಿಕ್ಷೆಗೊಳಪಡಬೇಕಾಗುತ್ತದೆ ಎಂದು ವಕೀಲಸಂಘದ ಕಾರ್ಯದರ್ಶಿ ಹೆಟ್.ಟಿ.ಹನುಮಂತಯ್ಯ ತಿಳಿಸಿದರು.
![]() |
| ಹುಳಿಯಾರು ಹೊಬಳಿ ಕೆಂಕೆರೆಯಲ್ಲಿ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ವಕೀಲ ಹನುಮಂತಯ್ಯ ಸ್ತ್ರೀಭ್ರೂಣಹತ್ಯೆ ಕುರಿತು ಉಪನ್ಯಾಸ ನೀಡಿದರು. |
ಹುಳಿಯಾರು ಹೋಬಳಿ ಕೆಂಕೆರೆಯಲ್ಲಿ ಜಿಲ್ಲಾ ಕಾನೂನು ಸೇವಾಪ್ರಾಧಿಕಾರ, ತಾಲ್ಲೂಕು ಕಾನೂನು ಸೇವಾಸಮಿತಿ, ವಕೀಲರ ಸಂಘ ಹಾಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಭಾನುವಾರ ನಡೆದ ಕಾನೂನು ಅರಿವು-ನೆರವು ಕಾರ್ಯಕ್ರಮದಲ್ಲಿ ಸ್ತ್ರೀಭ್ರೂಣಹತ್ಯೆ ಕುರಿತು ಉಪನ್ಯಾಸ ನೀಡಿದರು.
ಭಾರತೀಯ ಸಂಸ್ಕೃತಿಯಲ್ಲಿ ಸ್ತ್ರೀಯನ್ನು ಪೂಜನೀಯ ಸ್ಥಾನದಲ್ಲಿಟ್ಟು ಗೌರವಿಸುತ್ತಿದ್ದರೂ ಸಹ ಸ್ತ್ರೀಭ್ರೂಣಹತ್ಯೆ, ಬಾಲಕಿಯರ ಮೇಲಿನ ಅತ್ಯಾಚಾರ,ದೌರ್ಜನ್ಯದಂತಹ ಅನೇಕ ಪ್ರಕರಣಗಳು ದಿನೇದಿನೇ ಹೆಚ್ಚುತ್ತಲಿವೆ ಎಂದು ವಿಷಾದಿಸಿದರು. ಸಂವಿಧಾನದಲ್ಲಿ ಕಠಿಣ ಕಾನೂನುಗಳಿದ್ದರೂ ಅವುಗಳ ಬಗ್ಗೆ ಜನಸಾಮಾನ್ಯರಲ್ಲಿ ಅರಿವಿನ ಕೊರತೆಯಿಂದ ಇಂತಹ ಕೃತ್ಯಗಳನ್ನು ತಡೆಯಲಾಗುತ್ತಿಲ್ಲ ಎಂದರು. "ಜನನ ಪೂರ್ವ ಭ್ರೂಣಪತ್ತೆ ತಡೆ" ಎಂಬ ಕಾನೂನನ್ನು ಭ್ರೂಣಹತ್ಯೆ ತಡೆಯುವ ನಿಟ್ಟಿನಲ್ಲಿ ಜಾರಿಗೊಳಿಸಿದ್ದು ಇದರಡಿ ಕಠಿಣ ಶಿಕ್ಷೆಯ ಜೊತೆಗೆ ದಂಡವನ್ನು ವಿಧಿಸಲಾಗುತ್ತದೆ. ಮಗುಯಾವುದೆಂದು ಪತ್ತೆ ಮಾಡಲು ಸ್ಕ್ಯಾನಿಂಗ್ ಮಾಡಿಸುವ ವೇಳೆ ಅದರಲ್ಲಿನ ವಿಕಿರಣಗಳಿಂದಾಗಿ ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರಿ ಅಂಗವೈಕಲ್ಯತೆ ಉಂಟಾಗುವ ಸಾಧ್ಯತೆಗಳಿದ್ದು ಭ್ರೂಣಪತ್ತೆ ಬೇಡವೆಂದು ಎಚ್ಚರಿಸಿದರು.
ವಕೀಲ ಸಂಘದ ಮಾಜಿ ಅಧ್ಯಕ್ಷ ಕೆಂಕೆರೆವಿಶ್ವನಾಥ್ ಮಾತನಾಡಿ, ದಿನೇದಿನೇ ಅಪರಾಧ ಪ್ರಕರಣಗಳು ಹೆಚ್ಚುತ್ತಿರುವಂತೆ ಕಾನೂನುಗಳು ಸಹ ಕಠಿಣವಾಗುತ್ತಿವೆ. ಮಹಿಳೆಯರ ಮೇಲಿನ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಹೊಸಹೊಸ ಕಾನೂನುಗಳನ್ನು ಜಾರಿಗೆ ತಂದು ಮಹಿಳೆಯರ ಸುರಕ್ಷತೆಗೆ ಕಾನೂನಿನಡಿ ಹೆಚ್ಚು ಒತ್ತುಕೊಡುತ್ತಿರುವುದಾಗಿ ತಿಳಿಸಿದರು.
![]() |
| ಹುಳಿಯಾರು ಹೋಬಳಿ ಕೆಂಕೆರೆಯ ಧರ್ಮಸ್ಥಳ ಗ್ರಾಮಾಭಿವೃದ್ಧಿಯೋಜನೆಯ ಸ್ವಸಹಾಯ ಸಂಘಕ್ಕೆ ತಾಲ್ಲೂಕು ವಕೀಲ ಸಂಘದವತಿಯಿಂದ ಕಾನೂನು ಕೈಪಿಡಿ ಪುಸ್ತಕವನ್ನು ನೀಡಲಾಯಿತು. |
ಈ ಸಂದರ್ಭದಲ್ಲಿ ಧರ್ಮಸ್ಥಳ ಸಂಘದ ಕೆಂಕೆರೆ ಎ ಒಕ್ಕೂಟದ ಅಧ್ಯಕ್ಷ ದೊರೆಚನ್ನಬಸವಯ್ಯ, ಮೇಲ್ವಿಚಾರಕ ಕಮಲಾಕರ್, ಉಪಾಧ್ಯಕ್ಷೆ ಗಿರಿಜಮ್ಮ, ಕೋಶಾಧಿಕಾರಿ ಈಶ್ವರಯ್ಯ,ಸುವರ್ಣಮ್ಮ , ವಕೀಲ ಚಿಕ್ಕಣ್ಣ, ಸೇವಾಪ್ರತಿನಿಧಿ ಲೋಕೇಶ್ ಹಾಗೂ ಪ್ರಗತಿಬಂಧು ಸ್ವಸಹಾಯ ಸಂಘದ ಮಹಿಳೆಯರು ಉಪಸ್ಥಿತರಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ